ಚಂಬಾ

ಹಿಮಾಚಲಪ್ರದೇಶದ ಒಂದು ಜಿಲ್ಲೆ ; ಸಾಲ್ ಮತ್ತು ರಾವಿ ನದಿಗಳ ಸಂಗಮ ಪ್ರದೇಶದಲ್ಲಿರುವ ಒಂದು ಪಟ್ಟಣ. ಜಿಲ್ಲೆ ಹಿಮಾಲಯ ಮತ್ತು ಶಿವಾಲಿಕ ಪರ್ವತಗಳ ಮಧ್ಯೇ ರಾವಿ ಮತ್ತು ಚಂದ್ರಭಾಗಾ ನದಿಗಳಿಂದಾದ ಕಣಿವೆಯಲ್ಲಿದೆ. ಪಶ್ಚಿಮಕ್ಕೆ ಕಾಶ್ಮೀರ, ಪೂರ್ವಕ್ಕೆ ಲಡಾಖ್ ಮತ್ತು ಲಾಹೂಲ, ದಕ್ಷಿಣಕ್ಕೆ ಕಾಂಗಡಾ ಮತ್ತು ಗುರುದಾಸಪುರ ಜಿಲ್ಲೆಗಳಿವೆ. ಎಷ್ಟೋ ಕಡೆ ಈ ಭಾಗದ ಎತ್ತರ 2,000'-2,100'. 10,000' ಎತ್ತರದವರೆಗೆ ಮಾನವ ವಸತಿಗಳಿವೆ. ಚಂಬಾ, ಭರವತಾರ್, ಚುರಾಹ್, ಭಟಿಯಾತ್ ಮತ್ತು ಪಾಂಗೀ ಇಲ್ಲಿಯ ತಾಲ್ಲೂಕುಗಳು, ಚಂಬಾ ಪ್ರದೇಶ ಅರಣ್ಯಮಯವಾಗಿ ದುರ್ಗಮವಾಗಿದ್ದರೂ ರಮಣೀಯವಾದ್ದು.

	ಈ ಪ್ರದೇಶವನ್ನು ಕ್ರಿ.ಶ. 6ನೆಯ ಶತಮಾನದಲ್ಲಿ ಮೂಶಣ ವಂಶದವರು ಆಳುತ್ತಿದ್ದರೆಂಬುದು ಇಲ್ಲಿ ಸಿಕ್ಕಿರುವ ಶಾಸನದಿಂದ ಗೊತ್ತಾಗುತ್ತದೆ. ಚಂಬಾ ನಗರಕ್ಕೆ ಸುಮಾರು 25 ಮೈ. ದೂರದಲ್ಲಿರುವ ಬ್ರಹ್ಮೌರ್ (ಹಿಂದಿನ ಬ್ರಹ್ಮಪುರ) ಎಂಬಲ್ಲಿ ಆ ವಂಶದ ಅಜಿತವರ್ಮ ರಾಜ 750ರಲ್ಲಿ ರಾಜ್ಯವಾಳುತ್ತಿದ್ದನೆನ್ನಲಾಗಿದೆ. ಆತನ ಅನಂತರ ಸುವರ್ಣವರ್ಮ ಮತ್ತು ಲಕ್ಷ್ಮೀವರ್ಮ ಪಟ್ಟಕ್ಕೆ ಬಂದರು. ತರುವಾಯ ಬಂದ ಸಜ್ಜನವರ್ಮ ಚಂಪಕಾ (ಚಂಬಾ) ನಗರವನ್ನು ಸ್ಥಾಪಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಎಂಬುದು ಮ್ಹೊಗೆಲ್ ಅವರ ಮತ. ಇದನ್ನು 10ನೆಯ ಶತಮಾನದ ಪೂರ್ವಾರ್ಧದಲ್ಲಿ ಸಾಹಿಲ್ಲವರ್ಮ ಕಟ್ಟಿಸಿದನೆಂದೂ ಕೆಲವರ ಮತ.

		11ನೆಯ ಶತಮಾನದಿಂದ ಚಂಬಾ ರಾಜ್ಯದ ಇತಿಹಾಸ ಹೆಚ್ಚಾಗಿ ತಿಳಿದುಬಂದಿಲ್ಲ. ಹಿಂದೆ ಅದು ಚಿಕ್ಕ ಸಂಸ್ಥಾನವಾಗಿತ್ತು. ಈಗ ಹಿಮಾಚಲ ಪ್ರದೇಶದ ಒಂದು ಭಾಗವಾಗಿದೆ.

		ಚಂಬಾ ಪ್ರದೇಶದಲ್ಲಿ 8ನೆಯ ಶತಮಾನದಲ್ಲಿ ಬರೀ ಮರಗಳಿಂದ ನಿರ್ಮಿಸಲಾದ ದೇವಸ್ಥಾನಗಳು ಈಗಲೂ ಇವೆ. ಇವು ರಾಜ ಮೇರು ವರ್ಮನ ಕಾಲದಲ್ಲಿ ನಿರ್ಮಿತವಾದವೆನ್ನಲಾಗಿದೆ. ಬ್ರಹ್ಮೌರ್ ನಲ್ಲಿ ಲಕ್ಷ್ಮಣಾದೇವಿಯ ಮತ್ತು ಉದಯಪುರದಲ್ಲಿ ಮುರ್ಕುಲ ದೇವಿಯ ಗುಡಿಗಳು ಪ್ರಾಚೀನವಾದುವು. ಗರ್ಭಗುಡಿಯಲ್ಲಿ ಮತ್ತು ಪ್ರವೇಶದ್ವಾರಗಳಲ್ಲಿರುವ ನಕ್ಷೆ ಕೆಲಸಗಳು ಸುಂದರವಾಗಿವೆ. ಇವುಗಳಲ್ಲಿ ಅಷ್ಟಧಾತುಗಳಿಂದ ಕೂಡಿದ ಮಹಿಷಾಸುರಮರ್ದಿನಿಯ ಮೂರ್ತಿ ಅತ್ಯಂತ ಗಮನಾರ್ಹವಾದ್ದು.

		ಮುರ್ಕುಲ ದೇವಿ ಮತ್ತು ಶಕ್ತಿ ದೇವಿಯ ಆಲಯಗಳ ನಕ್ಷೆ ಕೆಲಸ ಅಪ್ರತಿಮವಾದ್ದು. ಮುರ್ಕುಲದೇವಿ ಗುಡಿಯಲ್ಲಿ ರಾಮಾಯಣ ಮಹಾಭಾರತ ಪ್ರಸಂಗಗಳನ್ನೂ ಶಿವ, ಪಾರ್ವತಿ, ನವಗ್ರಹ ಮತ್ತು ಲೋಹಪಾಲಮೂರ್ತಿಗಳನ್ನು ಸುಂದರವಾಗಿ ಕೆತ್ತಿದ್ದಾರೆ. ಎತ್ತರವಾದ ತ್ರಿಕೋನಾಕಾರದ ಚಪ್ಪರಗಳು ಮರದ ಈ ದೇವಸ್ಥಾನಗಳ ವೈಶಿಷ್ಟ್ಯ.

	 	ಬ್ರಹ್ಮೌರದ ಮಧ್ಯಭಾಗದಲ್ಲಿ ಕಲ್ಲುಕಟ್ಟಡದ ಮಣಿಮಹೇಶ ದೇವಸ್ಥಾನದ ಶಿಖರ ಎತ್ತರವಾದ್ದು. ಅಲ್ಲಿ ಹಿತ್ತಾಳೆಯಲ್ಲಿ ಕೊರೆದ ನಂದಿಯ ಮೇಲೆ ಮೇರುವರ್ಮನ ಆಲೇಖವಿದೆ. ಹಾಗೆಯೇ ನರಸಿಂಹ ದೇವಸ್ಥಾನ, ಎಂಬತ್ತನಾಲ್ಕು ಸಿದ್ಧರ ಸಮಾಧಿ, ಗಣೇಶಮೂರ್ತಿ, ಸೂರ್ಯಮುಖಿ ಶಿವಲಿಂಗ ಇವೆ.
ಚಂಬಾದ ಶಿಲ್ಪಕಲೆಯಲ್ಲಿ ಉತ್ತಮ ಗುಪ್ತಶೈಲಿಯ ಮಾದರಿಯನ್ನೂ ಸ್ಥಳೀಯ ಜನರ ಶೈಲಿಯನ್ನೂ ಕಾಣಬಹುದು. ಮುರ್ಕುಲ ದೇವಿ ಮಂದಿರ ಕಾಶ್ಮೀರಿ ಕಲಾ ಶೈಲಿಯಲ್ಲಿ ಕಟ್ಟಲಾದ್ದು. ಚಂಬಾ ನಗರದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸಂಗಮರವರೀ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಸುಂದರ ಮೂರ್ತಿಯಿದೆ. ಇದನ್ನು ರಾಜ ಸಾಹಿಲ್ಲವರ್ಮ ನಿರ್ಮಿಸಿದ. ಚಂದ್ರಗುಪ್ತ ಮತ್ತು ತ್ರಿಮುಖರ ಶೈವಮಂದಿರಗಳೂ ಈತ ನಿರ್ಮಿಸಿದವೇ. ಲಕ್ಷ್ಮಣ ವರ್ಮನೆಂಬ ರಾಜಕುಮಾರ 11ನೆಯ ಶತಮಾನದಲ್ಲಿ ಶ್ರೀ ಹರಿಹರ ದೇವಸ್ಥಾನವನ್ನು ಕಟ್ಟಿಸಿದ. ಸಾಹಿಲ್ಲವರ್ಮನ ಮಗಳಾದ ಚಂಪಾವತಿಯ ಪ್ರೀತ್ಯರ್ಥವಾಗಿ ಚಂಪೇಶ್ವರೀ ದೇವಸ್ಥಾನವನ್ನು ಕಟ್ಟಿಸಲಾಯಿತೆಂದು ಪ್ರತೀತಿ.

		ಚಂಬಾದಲ್ಲಿ ರಾವಿ ನದೀತೀರದಲ್ಲಿರುವ ರಂಗಮಹಲಿನ ಭಿತ್ತಿಚಿತ್ರಗಳಲ್ಲಿ ರಾಮಾಯಣ, ಭಗವತ, ದುಗಾಈಸಪ್ತಶತಿಗಳ ಪ್ರಸಂಗಗಳ ಚಿತ್ರಣಗಳಿವೆ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ